ಶ್ರೀ ಸಾವಳಗಿ ಶಿವಲಿಂಗೇಶ್ವರ ಮಹಾತ್ಮೆ ಚಿತ್ರದ ಚಿತ್ರೀಕರಣ ಶೀಘ್ರ ದಲ್ಲೇ ಆರಂಭ. 

0

ಶ್ರೀ ಸಾವಳಗಿ ಶಿವಲಿಂಗೇಶ್ವರ ಮಹಾತ್ಮೆ ಚಿತ್ರದ ಚಿತ್ರೀಕರಣ ಶೀಘ್ರ ದಲ್ಲೇ ಆರಂಭ

ಹಿರಿಯ ಪತ್ರಕರ್ತ ಹಾಗೂ ಚಲನಚಿತ್ರ ನಿರ್ದೇಶಕ ಬಸವರಾಜ ಪಟ್ಟಣಶೆಟ್ಟಿ ಇವರು ತಮ್ಮ ಶ್ರೀ ಖನ್ನಮ್ಮ ದೇವಿ ಕಂಬೈನ್ಸ ಸಂಸ್ಥೆಯ ಮೂಲಕ ಹಿಂದೂ ಮುಸ್ಲಿಮ ಭಾವೈಕ್ಯತೆಯ ಸಂತ ಮಹಾತ್ಮ ಶ್ರೀ ಸಾವಳಗಿ ಶಿವಲಿಂಗೇಶ್ವರರ ಕುರಿತು ಚಿತ್ರವನ್ನು ನಿರ್ಮಿಸಲಿದ್ದಾರೆ. ವಿಜಯನಗರ ಸಾಮ್ರಾಜ್ಯ ಅಳಿದ ನಂತರದ ಸಂಘರ್ಷ ಕಾಲದಲ್ಲಿ ಶಿವಲಿಂಗೇಶ್ವರ ರು ಬದುಕಿ ದೀನರ ನೊಂದವರ ಉಧ್ದಾರ ಮಾಡುತ್ತ ಆಧ್ಯಾತ್ಮಿಕ ಬೆಳಕನ್ನು ಚೆಲ್ಲುತ್ತ ಹಿಂದೂ ಮುಸ್ಲಿಮರ ನಡುವೆ ಭಾವೈಕ್ಯತೆಯ ಬಂಧನವನ್ನು ಕಟ್ಟಿದರು.

ಕಲ್ಬುರ್ಗಿ ಜಿಲ್ಲೆಯಲ್ಲಿ ಮಠ ಕಟ್ಟಿದರು. ಇವರ ಕೀರ್ತಿಯನ್ನು ಕೇಳಿ ಕಲ್ಬುರ್ಗಿಯ ಮುಸ್ಲಿಂ ಸಂತ ಖಾಜಾ ಬಂದೇ ನವಾಜ ಇವರ ದರ್ಶನಕ್ಕೆ ಹುಲಿ ಹತ್ತಿ ಬರುತ್ತಾನೆ. ಆಗ ಕಟ್ಟೆಯ ಮೇಲೆ ಕುಳಿತಿದ್ದ ಶಿವಲಿಂಗೇಶ್ವರರು ದೊಡ್ಡವರು ದರ್ಶನಕ್ಕೆ ಬರುತ್ತಿದ್ದಾರೆ ನಡೇ ಎಂದು ತಾವು ಕುಳಿತ ಕಟ್ಟೆಯನ್ನೇ ಓಡಿಸಿ ಬಂದೇನವಾಜರನ್ನು ಎದುರುಗೊಂಡರು. ಶಿವಲಿಂಗೇಶ್ವರರ ಶಕ್ತಿಯನ್ನು ಅರಿತ ಬಂದೇ ನವಾಜರು ಕಲ್ಬುರ್ಗಿಯ ಉರುಸಿಗೆ ಕರೆಸಿ ಮುಸ್ಲಿಮ ಸಂಪ್ರದಾಯ ಉಡುಪು ನೀಡಿ ಗೌರವಿಸಿದರು. ಇಬ್ಬರೂ ಸಂತರ ಹಿಂದೂ ಮುಸ್ಲಿಮರ ನಡುವೆ ಸಾಮರಸ್ಯ ಮೂಡಿಸಿ ಶಾಂತಿ ನೆಲೆಸಿದರು. ಅಂತೆಯೇ ಗೋಕಾಕ ತಾಲ್ಲೂಕಿನ ಸಾವಳಗಿ ಮಠದ ಮೇಲೆ ಮಸೀದಿಯಂತೆ ಮಿನಾರ್ ಇದ್ದರೆ ಕೆಳಗೆ ಶಿವಲಿಂಗೇಶ್ವರರ ಜೀವಂತ ಸಮಾಧಿಯ ಗದ್ದುಗೆ ಇದೆ. ಲೋಕ ಕಲ್ಯಾಣ ಮಾಡುತ್ತ ಗೋಕಾಕ ಬಳಿ ಬಂದ ಶಿವಲಿಂಗೇಶ್ವರರು ಈ ಸಾವಳಗಿಯಲ್ಲಿ ಕೊನೆಯ ದಿನಗಳನ್ನು ಕಳೆದರು. ಇಲ್ಲಿಯ ಗದ್ದುಗೆ ಅವರ ಜೀವಂತ ಸಮಾಧಿಯ ಪುಣ್ಯ ಕ್ಷೇತ್ರ.

ಸುಮಾರು ನೂರಿಪ್ಪತ್ತು ವರ್ಷ ಹಿಂದೆ ಬರೆದಿದ್ದ ಶಿವಪುರದ ಸಿಧ್ಧಲಿಂಗ ಕವಿಯ ಸಾವಳಗಿ ಶಿವಲಿಂಗೇಶ್ವರ ಪುರಾಣ ಕೃತಿಯನ್ನು ಆದರಿಸಿ ಬಸವರಾಜ ಪಟ್ಟಣಶೆಟ್ಟಿಯವರು ಚಿತ್ರಕಥೆ, ಹಾಡು, ಸಂಭಾಷಣೆಯನ್ನು ರಚಿಸಿ,ತಾವೇ ಶಿವಲಿಂಗೇಶ್ವರ ಪಾತ್ರವನ್ನು ಅಭಿನಯಿಸಿ ನಿರ್ದೇಶನ ಮಾಡುತ್ತಿದ್ದಾರೆ. ಇತರ ಪಾತ್ರಗಳಲ್ಲಿ ಗೋಕಾಕದ ಅಮ್ಮಾಜಿ ,ಸುಧಾ ಮಠಪತಿ ಹಾಗೂ ಚಲನಚಿತ್ರರಂಗದ ಖ್ಯಾತ ಕಲಾವಿದೆ ಸುನಂದಾ ಕಲ್ಬುರ್ಗಿ ಹಾಗೂ ಹುಕ್ಕೇರಿಯ ಕು.ಅಮೋಘ ದೇಶಪಾಂಡೆ,ಜಿ.ಎ.ಪತ್ತಾರ, ಈಶ್ವರ ಚಂದ್ರ ಬೆಟಗೇರಿ ,ಅಭಿಲಾಷ ಶಿರಗಾಂವಕರ, ಸಿಧ್ಧನಾಯಕ ಪಾಟೀಲ….ಮುಂತಾದವರು ಅಭಿನಯಿಸಲಿದ್ದಾರೆ. ಛಾಯಾಗ್ರಹಣ ವೆಂಕಟೇಶ ಅವರದ್ದು. ಸಂಕಲನ ಲಕ್ಷ್ಮೀ ರಾಜಶೆಟ್ಟಿ ಅವರದು. ನಿರ್ಮಾಪಕರು ಬಸವರಾಜ ಪಟ್ಟಣಶೆಟ್ಟಿ ಹಾಗೂ ಅಪ್ಪಾಸಾಹೇಬ ಕುರಣೆ ಮತ್ತು ಮಿತ್ರರು.

ಈ ತಂಡದ ಸಾಹಸ ಯಶಸ್ವಿ ಆಗಲಿ, ಶಿವಲಿಂಗೇಶ್ವರರ ಚರಿತ್ರೆ ಮನೆ ಮನೆ ಮುಟ್ಟಲಿ ಎಂದು ಹಾರೈಸುತ್ತೇವೆ.