ಪ್ರಿನ್ಸಿಪಾಲ್ ಸೂಸೈಡ್ ಕೇಸ್ : ಅಧಿಕಾರಿ‌ ಹಾಗೂ ಶಿಕ್ಷಕನ ವಿರುದ್ಧ ಎಫ್ಐಆರ್

0

ಪ್ರಿನ್ಸಿಪಾಲ್ ಸೂಸೈಡ್ ಕೇಸ್ : ಅಧಿಕಾರಿ‌ ಹಾಗೂ ಶಿಕ್ಷಕನ ವಿರುದ್ಧ ಎಫ್ಐಆರ್!

ರಾಮನಗರ: ರಾಮನಗರ ಜಿಲ್ಲೆಯ ವಸತಿ ಶಾಲೆಯ ಪ್ರಾಚಾರ್ಯೆಯೊಬ್ಬರು ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆಯಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದು, ಅವರು ನೀಡಿದ ದೂರಿನ ಮೇರೆಗೆ ರಾಮನಗರದ ಸಮಾಜ ಕಲ್ಯಾಣ ಇಲಾಖೆಯ ಹಿಂದಿನ ಉಪ ನಿರ್ದೇಶಕ ಯೋಗೇಶ್ ಎಸ್‌.ಬಿ ಮತ್ತು ಅದೇ ಶಾಲೆಯ ಕನ್ನಡ ಶಿಕ್ಷಕ ಮಹೇಶ್ ಎಂ.ಬಿ ವಿರುದ್ಧ ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಲೈಂಗಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದ್ದ ಯೋಗೇಶ್ ಅವರು ತಮ್ಮೊಂದಿಗೆ ಸಹಕರಿಸುವಂತೆ ಪೀಡಿಸುತ್ತಿದ್ದರು. ಈ ಬಗ್ಗೆ ಆಕ್ಷೇಪಿಸಿದರೂ ಅವರು ಮುಂದುವರೆಸಿದ್ದರು. ಶಾಲೆಯ ನಿರ್ಮಾಣ ಹಂತದ ಕಟ್ಟಡ ಪರಿಶೀಲನೆಗೆ ಬಂದ ವೇಳೆ ನನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಪ್ರಾಚಾರ್ಯೆ ದೂರಿನಲ್ಲಿ ತಿಳಿಸಿದ್ದಾರೆ.

ಕಾರ್ಯನಿಮಿತ್ತ ಅವರ ಕಚೇರಿಗೆ ಹೋದಾಗಲೆಲ್ಲಾ ಈ ರೀತಿ ಕೆಟ್ಟದಾಗಿ ವರ್ತಿಸುತ್ತಿದ್ದರು. ಪತಿಗೆ ಈ ವಿಚಾರ ತಿಳಿಸಿದಾಗ ಅವರು ಯೋಗೇಶ್ ಅವರನ್ನು ಭೇಟಿ ಮಾಡಿ, ನಿಮ್ಮ ನಡತೆ ಸರಿಪಡಿಸಿಕೊಳ್ಳಿ ಎಂದು ಬುದ್ಧಿವಾದ ಹೇಳಿದ್ದರು. ಇದಾದ ಬಳಿಕ ಮತ್ತೆ ಅವರು ತೊಂದರೆ ನೀಡಲು ಆರಂಭಿಸಿದರು.

ಬಳಿಕ ಶಾಲೆಯಲ್ಲಿರುವ ಕನ್ನಡ ಶಿಕ್ಷಕ ಮಹೇಶ್ ಎಂ.ಬಿ ಎಂಬುವರನ್ನು ಬಳಸಿಕೊಂಡು ನನ್ನ ವಿರುದ್ಧ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ನನ್ನ ಜಾತಿ ವಿಷಯ ಪ್ರಸ್ತಾಪಿಸಿ, ಅವರಿಗೆ ನೀವು ಸಹಕರಿಸಬೇಡಿ ಎಂದು ಹೇಳುತ್ತಿದ್ದರು. ಇದೇ ವಿಷಯ ತಾರಕಕ್ಕೇರಿ ನನ್ನನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಶಿಕ್ಷಕ ಮಹೇಶ್ ಅವರಿಗೆ ಜವಾಬ್ದಾರಿ ನೀಡಿದರು.

ಇವರಿಬ್ಬರು ನೀಡಿದ ಮಾನಸಿಕ ಹಿಂಸೆ, ಲೈಂಗಿಕ ಕಿರುಕುಳ, ಅವಮಾನ ತಡೆಯಲಾಗದೆ ಆತ್ಮಹತ್ಯೆಗೆ ಯತ್ನಿಸಿದ್ದೆ. ಆಸ್ಪತ್ರೆಯಲ್ಲಿ 12 ದಿನ ಚಿಕಿತ್ಸೆ ಪಡೆದು ಚೇತರಿಸಿಕೊಂಡ ಬಳಿಕ ಠಾಣೆಗೆ ಬಂದು ದೂರು ನೀಡಿದ್ದೇನೆ ಎಂದು ಪ್ರಾಚಾರ್ಯೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.