ದಾರಿಯಲ್ಲಿ ಕೆಟ್ಟು ನಿಂತ ಎರಡು ಚಿಗರಿ BRTS ಬಸ್ ಗಳು

0

ದಾರಿಯಲ್ಲಿ ಕೆಟ್ಟು ನಿಂತ ಎರಡು ಚಿಗರಿ BRTS ಬಸ್ ಗಳು

BRTS buses are broken down on the road – Dharwad-Hubli

ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ನಗರದಲ್ಲಿ ಸಂಚರಿಸುವ ಚಿಗರಿ ಬಸ್ ಬಂದು ಜನರಿಗೆ ಅನುಕೂಲ ಆಗಿದೆಯೋ ಇಲ್ಲವೋ ಗೊತ್ತಿಲ್ಲ, ಸಾಕಷ್ಟು ಅವ್ಯವಸ್ಥೆಯಂತೂ ಆಗಿದೆ. ಒಂದೇ ರಸ್ತೆಯಲ್ಲಿ ಎರಡು ಬಸ್ ಕೆಟ್ಟು ನಿಂತಿರುವುದು ನಿಜಕ್ಕೂ ಜನರಲ್ಲಿ ಆತಂಕವನ್ನುಂಟು ಮಾಡಿದೆ.

ಹೌದು.. ಉಣಕಲ್ ಸಿದ್ದಪ್ಪಜ್ಜನ ದೇವಸ್ಥಾನದ ಹತ್ತಿರ ಒಂದು ಬಸ್ ಕೆಟ್ಟು ನಿಂತಿದ್ರೆ, ಮತ್ತೊಂದು ಬಸ್ ಉಣಕಲ್ ಕೆರೆಯ ಮುಂದಿನ ಭಾಗದಲ್ಲಿ ಕೆಟ್ಟು ನಿಂತಿರುವುದು ಪ್ರಯಾಣಿಕರಲ್ಲಿ ಆತಂಕದ ಭಾವವನ್ನು ಹುಟ್ಟು ಹಾಕಿದೆ. ಒಂದೇ ರಸ್ತೆಯ 100 ಮೀಟರ್ ಅಂತರದಲ್ಲಿ ಎರಡು ಬಸ್ ಕೆಟ್ಟು ನಿಂತಿರುವುದು ನಿಜಕ್ಕೂ ಏನಿದು ಅವ್ಯವಸ್ಥೆ ಅಂತಾ ಜನರು ಪ್ರಶ್ನಿಸುವಂತಾಗಿದ್ದು, ಚಿಗರಿಯ ಅವ್ಯವಸ್ಥೆಯಿಂದ ಜನರು ಬೇಸತ್ತು ಹೋಗಿದ್ದಾರೆ.

ಹಲವು ಸಮಸ್ಯೆಗಳ ನಡುವೆಯೂ ಸುಖಾಸೀನ ಸಾರಿಗೆ ಸೇವೆ ನೀಡುತ್ತಿರುವ ‘ಚಿಗರಿ ಬಸ್ಸು’ಗಳಲ್ಲಿ ಆಗಾಗ ಸಮಸ್ಯೆಗಳು ಕಂಡುಬರುತ್ತಿವೆ. ಕಳೆದ 3-4 ವರ್ಷಗಳಿಂದ ಹುಬ್ಬಳ್ಳಿ- ಧಾರವಾಡ ನಗರದಲ್ಲಿ ಸಂಚರಿಸುತ್ತಿರುವ ಬಿಆರ್‌ಟಿಎಸ್‌ ಬಸ್ಸುಗಳಲ್ಲಿ ಈ ಹಿಂದೆ ಜಿರಳೆ ಹಾವಳಿಯಿಂದ ಪ್ರಯಾಣಿಕರು ಹೈರಾಣಾಗಿದ್ದರು.

ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಚಿಗರಿ ಬಸ್‍ಗಳು ಅನೇಕ ಕಡೆಗಳಲ್ಲಿ  ಪದೇ ಪದೇ ಕೆಟ್ಟು ನಿಲ್ಲುತ್ತಿವೆ. ಈ ಬಸ್‌ ಸಂಪೂರ್ಣ ಹವಾ ನಿಯಂತ್ರಿತ. ಆದರೆ ಹಲವು ಬಸ್‍ಗಳಲ್ಲಿ ಎಸಿಯೇ ಕೆಲಸ ಮಾಡುತ್ತಿಲ್ಲ. ಈ ಬಗ್ಗೆ ಪ್ರಯಾಣಿಕರು ಪ್ರಶ್ನಿಸಿದರೂ ಪ್ರಯೋಜನವಾಗಿಲ್ಲ. ಅನೇಕ ಸಮಸ್ಯೆಗಳಿದ್ದರೂ ಸಹ ಪ್ರಯಾಣಿಕರು ಎಲ್ಲವನ್ನೂ ಸಹಿಸಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ‘ಶಕ್ತಿ ಯೋಜನೆ’ ಈ ಚಿಗರಿ ಬಸ್‍ಗಳಿಗೆ ಅನ್ವಯವಾಗುತ್ತಿಲ್ಲ. ಉಚಿತ ಸಾರಿಗೆ ಇದೆ ಎಂದು ಅನೇಕ ಮಹಿಳೆಯರು ಈ ಬಸ್‍ಗಳನ್ನು ಹತ್ತಿ ಟಿಕೆಟ್ ಪಡೆದು ಸರ್ಕಾರಕ್ಕೆ ಮತ್ತು ಸಾರಿಗೆ ಇಲಾಖೆಗೆ ಹಿಡಿಶಾಪ ಹಾಕಿದ್ದುಂಟು.

ದೇಶದಲ್ಲಿಯೇ 2ನೇ ಹಾಗೂ ರಾಜ್ಯದ ಪ್ರಪ್ರಥಮ ಬಿಆರ್‌ಟಿಎಸ್‌ ಯೋಜನೆಯನ್ನು ಸುಮಾರು 970 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ. 2020ರ ಫೆಬ್ರವರಿ 2ರಂದು ಅಂದಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಈ ಸಾರಿಗೆ ವ್ಯವಸ್ಥೆಯನ್ನು ಉದ್ಘಾಟಿಸಿದ್ದರು. ಕೇಂದ್ರ, ರಾಜ್ಯ ಸರ್ಕಾರ ಮತ್ತು ವಿಶ್ವಬ್ಯಾಂಕ್‌ ಜಂಟಿ ಯೋಜನೆಯಾಗಿ 970.87ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಯಾಗಿದೆ. ನರ್ಮ್‌ ಯೋಜನೆಯಡಿ 120ಕ್ಕೂ ಅಧಿಕ AC ಬಸ್‌ ಖರೀದಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ ನಡುವೆ ಸುಮಾರು 32 ಬಸ್‌ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. 6 ಪಾದಚಾರಿ ಮೇಲ್ಸೇತುವೆ, ಹೊಸೂರಿನ 17 ಎಕರೆ ಪ್ರದೇಶದಲ್ಲಿ ಪ್ರಾದೇಶಿಕ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಈ ಚಿಗರಿ ಬಸ್‌ಗಳಲ್ಲಿ ನಿತ್ಯವೂ 1 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ ಹಲವಾರು ಸಮಸ್ಯೆಗಳು ಮಾತ್ರ ಪ್ರಯಾಣಿಕರಿಗೆ ತೊಂದರೆ ನೀಡುತ್ತಿದೆ. ಹೀಗಾಗಿ ಸಂಬಂಧಿತ ಅಧಿಕಾರಿಗಳು ಈ ಸಮಸ್ಯೆಗಳತ್ತ ಗಮನಹರಿಸಬೇಕಾಗಿದೆ.

Amazon offers : Click here.

Guruvani Digital Media